ಚೆನ್ನೈ: 2019ರಲ್ಲಿ ತಮಿಳುನಾಡಿನ ಪೊಲ್ಲಾಚಿ ನಡೆದ ಸಾಮೂಹಿಕ ಅತ್ಯಾಚಾರದ ಆರೋಪಿಗಳನ್ನು ಕೊಯಮತ್ತೂರಿನ ಸೆಷನ್ಸ್ ನ್ಯಾಯಾಲಯವು ಎಲ್ಲಾ ಒಂಬತ್ತು ಆರೋಪಿಗಳನ್ನೂ ದೋಷಿ ಎಂದು ಮಂಗಳವಾರ ಮಹತ್ವದ ತೀರ್ಪು ನೀಡಿ ಜೀವಾವಧಿ ಶಿಕ್ಷೆ ವಿಧಿಸಿದೆ.
ಶಿಕ್ಷೆಗೊಳಗಾದ ಆರೋಪಿಗಳು
ಶಬರಿರಾಜನ್ ಅಲಿಯಾಸ್ ರಿಶ್ವಂತ್ (32), ತಿರುನಾವುಕರಸು (34), ಟಿ. ವಸಂತ ಕುಮಾರ್(30) ಎಂ.ಸತೀಶ (33) ಮಣಿ ಅಲಿಯಾಸ್ ಮಣಿವಣ್ಣನ್ (33), ಪಿ.ಬಾಬು (33), ಹಾರೂನ್ ಪೌಲ್ (32), ಅರುಳನಾಥಂ (39) ಮತ್ತು ಅರುಣ್ ಕುಮಾರ್ (33)
ಬಂಧಿತ ಆರೋಪಿಗಳು 2019ರಿಂದ ಸೇಲಂ ಸೆಂಟ್ರಲ್ ಜೈಲಿನಲ್ಲಿ ಕೈದಿಗಳಾಗಿದ್ದಾರೆ. ಮಂಗಳವಾರ ಬೆಳಗ್ಗೆ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಆರೋಪಿಗಳನ್ನು ಸೆಷನ್ಸ್ ಕೋರ್ಟ್ ಗೆ ಕರೆತರಲಾಗಿತ್ತು. ಕೋರ್ಟ್ ಆವರಣ ಸೇರಿದಂತೆ ಆಯ್ದ ಸ್ಥಳಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು ಎಂದು ವರದಿ ತಿಳಿಸಿದೆ.ವಿಚಾರಣೆ ವೇಳೆ, ವಿಧಿವಿಜ್ಞಾನ ಪ್ರಯೋಗಾಲಯ ದೃಢಪಡಿಸಿದ ವಿಡಿಯೋಗಳು, 200 ಡಾಕ್ಯುಮೆಂಟ್ಸ್ ಗಳು ಹಾಗೂ 400 ಎಲೆಕ್ಟ್ರಾನಿಕ್ ಪುರಾವೆಗಳೊಂದಿಗೆ ಪಬ್ಲಿಕ್ ಪ್ರಾಸಿಕ್ಯೂಟರ್ ವಾದ ಮಂಡಿಸಿದ್ದರು. ಸಾಕ್ಷಿಗಳ ಗುರುತು ಮತ್ತು ರಕ್ಷಣೆಯ ಭರವಸೆಯೊಂದಿಗೆ ಸಾಕ್ಷ್ಯ ಪಡೆಯಲಾಗಿತ್ತು ಎಂದು ಪ್ರಾಸಿಕ್ಯೂಟರ್ ತಿಳಿಸಿದ್ದಾರೆ.
ಪೊಲ್ಲಾಚಿ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಎಲ್ಲಾ 9 ಆರೋಪಿಗಳು ದೋಷಿ ಎಂದು ಸೆಷನ್ಸ್ ನ್ಯಾಯಾಲಯದ ನ್ಯಾಯಧೀಶರಾದ ಆರ್.ನಂದಿನಿ ದೇವಿ ತೀರ್ಪು ನೀಡಿದ್ದಾರೆ ಎಂದು ವರದಿ ತಿಳಿಸಿದೆ.ತಮಿಳುನಾಡು ಸರ್ಕಾರವು 8 ಸಂತ್ರಸ್ತರಿಗೆ 85 ಲಕ್ಷ ರೂ. ಪರಿಹಾರವನ್ನು ನೀಡಬೇಕೆಂದು ನ್ಯಾಯಾಧೀಶರು ನಿರ್ದೇಶಿಸಿದರು. ಪ್ರತಿಯೊಬ್ಬ ಸಂತ್ರಸ್ತೆಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ 10-15 ಲಕ್ಷ ರೂ.ವರೆಗೆ ನೀಡಲಾಯಿತು.
ಮಹಿಳಾ ನ್ಯಾಯಾಲಯದ ನ್ಯಾಯಮೂರ್ತಿ ನಂದಿನಿ ದೇವಿ, 9 ಆರೋಪಿಗಳಿಗೆ ಭಾರತೀಯ ದಂಡ ಸಂಹಿತೆಯ ಬಹು ವಿಭಾಗಗಳ ಅಡಿಯಲ್ಲಿ ತಪ್ಪಿತಸ್ಥರು ಎಂದು ತೀರ್ಪು ನೀಡಿದರು. ಬಳಿಕ ಅವರಿಗೆ ಜೀವಾವಧಿ ಶಿಕ್ಷೆ ಘೋಷಿಸಿದರು. ಪ್ರತಿಯೊಬ್ಬ ಆರೋಪಿಯ ವಿರುದ್ಧ ಸಾಬೀತಾಗಿರುವ ಪಾತ್ರ ಮತ್ತು ಆರೋಪಗಳ ಆಧಾರದ ಮೇಲೆ ಶಿಕ್ಷೆಯ ತೀವ್ರತೆಯಲ್ಲಿ ವ್ಯತ್ಯಾಸವಿತ್ತು.ಹೀಗಾಗಿ, ತಿರುನಾವುಕರಸು ಮತ್ತು ಮಣಿವಣ್ಣನ್ ಅವರಿಗೆ ಅತ್ಯಂತ ಕಠಿಣ ಶಿಕ್ಷೆಗಳನ್ನು ವಿಧಿಸಲಾಯಿತು. ಇಬ್ಬರಿಗೂ ತಲಾ 5 ಜೀವಾವಧಿ ಶಿಕ್ಷೆಗಳನ್ನು ವಿಧಿಸಲಾಗಿದೆ. ಶಬರಿರಾಜನ್ ಅವರಿಗೆ 4 ಜೀವಾವಧಿ ಶಿಕ್ಷೆಗಳು, ಸತೀಶ್ಗೆ 3 ಮತ್ತು ಹರನ್ ಪಾಲ್ಗೆ 3 ಜೀವಾವಧಿ ಶಿಕ್ಷೆಗಳನ್ನು ವಿಧಿಸಲಾಯಿತು. ವಸಂತ ಕುಮಾರ್ಗೆ 2 ಜೀವಾವಧಿ ಶಿಕ್ಷೆಗಳು, ಬಾಬು, ಅರುಳನಂತಮ್ ಮತ್ತು ಅರುಣ್ ಕುಮಾರ್ಗೆ ತಲಾ 1 ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಕಾನೂನು ಪರಿಭಾಷೆಯಲ್ಲಿ ನ್ಯಾಯಾಲಯದ ನಿರ್ದೇಶನವನ್ನು ಅವಲಂಬಿಸಿ ಬಹು ಜೀವಾವಧಿ ಶಿಕ್ಷೆಗಳು ಸತತವಾಗಿ ಅಥವಾ ಏಕಕಾಲದಲ್ಲಿ ಜಾರಿಯಾಗಬಹುದು. ಅವರು ಮಾಡಿದ ಅಪರಾಧಗಳ ಪ್ರಮಾಣ ಎಷ್ಟು ದೊಡ್ಡದಾಗಿದೆ ಎಂಬುದರ ಮೇಲೆ ಇದು ಅವಲಂಬಿತವಾಗಿರುತ್ತದೆ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ ಎನ್ನಲಾಗಿದೆ.
ಕಾಲೇಜು ವಿದ್ಯಾರ್ಥಿನಿ ಸೇರಿದಂತೆ ಕನಿಷ್ಠ ಎಂಟು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ, ಅದರ ವೀಡಿಯೊ ಸೆರೆಹಿಡಿದು ನಿರಂತರವಾಗಿ ಬ್ಲ್ಯಾಕ್ ಮೇಲೆ ಮಾಡಲಾಗಿತ್ತು. 2016ರಿಂದ 2018ರವರೆಗೆ ಮಹಿಳೆಯರನ್ನು ಬ್ಲ್ಯಾಕ್ ಮೇಲ್ ಮಾಡಿ, ಹಣ ವಸೂಲಿ ಮಾಡಿರುವುದಾಗಿ ವರದಿ ತಿಳಿಸಿದೆ.ಭಾರೀ ಆಕ್ರೋಶಕ್ಕೊಳಗಾದ ಈ ಘಟನೆ ಬಗ್ಗೆ ಆರಂಭದಲ್ಲಿ ಪೊಲ್ಲಾಚಿ ಪೊಲೀಸರು ತನಿಖೆ ನಡೆಸಿದ್ದರು. ನಂತರ ತಮಿಳುನಾಡು ಕ್ರೈಂ ಬ್ರಾಂಚ್ ಗೆ ಪ್ರಕರಣ ವರ್ಗಾವಣೆಗೊಂಡಿತ್ತು. ತದನಂತರ ಒತ್ತಡಕ್ಕೆ ಮಣಿದ ಸರ್ಕಾರ ತನಿಖೆಯನ್ನು ಸಿಬಿಐಗೆ ಒಪ್ಪಿಸಿತ್ತು ಎಂದು ವರದಿ ತಿಳಿಸಿದೆ.